ಕಾರಂತ, ಬಿ ವಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಬಿ.ವಿ. ಕಾರಂತರು ಹುಟ್ಟಿದ್ದು 1928ರ ಅಕ್ಟೋಬರ್ ಏಳರಂದು. ಹುಟ್ಟಿದ ಊರು ದಕ್ಷಿಣಕನ್ನಡದ ಬಂಟ್ವಾಳ ತಾಲ್ಲೂಕಿನ ಕುಕ್ಕಾಜೆ. ತಂದೆ ಬಾಬುಕೋಡಿ ನಾರಣಪ್ಪಯ್ಯ. ತಾಯಿ ಲಕ್ಷಮ್ಮ. ಅಡಿಕೆ ತೋಟದವರ ಲೆಕ್ಕ ಬರೆಯುವುದು, ಮನೆಪಾಠ ಹೇಳುವುದು ನಾರಣಪ್ಪಯ್ಯನ ಉದ್ಯೋಗ. ತಾಯಿ ಲಕ್ಷಮ್ಮ ಚೊಚ್ಚಲ ಕೂಸು ಬಿ.ವಿ.ಕಾರಂತರನ್ನು ಬೋಯಣ್ಣ ಎಂದು ಕರೆದು, ಕೊಂಡಾಟ ಮಾಡುತ್ತಿದ್ದರು. ಈ ಕೊಂಡಾಟದಲ್ಲಿ ಕಾರಂತರು ತಾಯಿಯಿಂದ ಸಂಪ್ರದಾಯದ ಹಾಡುಗಳು, ಭಜನೆ, ಹರಿಕಥೆ, ಯಕ್ಷಗಾನ ಮೊದಲಾದವುಗಳ ಸವಿಯನ್ನು ಉಂಡರು. ಬಾಲ್ಯದಲ್ಲೇ ಸಂಗೀತ ಕಾರಂತರ ಸುಪ್ತಪ್ರತಿಭೆಯಲ್ಲಿ ಊರಿಬಿಟ್ಟಿತು.

ಬೋಯಣ್ಣ ಮಾಣಿಗೆ ಇನ್ನೂ ಮಾಸೆ ಮೂಡದ ಪ್ರಾಯ. ಈ ಪ್ರಾಯಕ್ಕೇ ಗುಬ್ಬಿ ಕಂಪನಿಯ 'ಕೃಷ್ಣಲೀಲಾ' ನೋಡುವ ಕನಸು. ನಾಟಕ ನೋಡಲು ಮಾಣಿ ಬೋಯಣ್ಣ ಪಾಣೆ ಮಂಗಳೂರಿನಿಂದ ಮಂಗಳೂರಿಗೆ ಸೈಕಲ್ ಹೊಡೆದದ್ದು, ಸೈಕಲ್‍ನಿಂದ ಬಿದ್ದು ಹಲವು ದಿನ ನರಳಿದ್ದು. ಆದರೆ, ಗುಬ್ಬಿ ಕಂಪನಿ ನಾಟಕದ ರೋಮಾಂಚನ ಸುಖ, ಚಿರನೆನಪು. ಈ ಮಾಣಿ ಬೋಯಣ್ಣ, ಮುಂದೆ ಕನ್ನಡ ರಂಗಭೂಮಿಯ ಮೇರು ಪುರಷನಾಗಿ ಬೆಳೆದ. ತಮ್ಮ ಗಂಧರ್ವ ಸ್ಪರ್ಶದಿಂದ ಕನ್ನಡ ರಂಗಭೂಮಿಯ ಸಾವ್ಮಥ್ರ್ಯಗಳನ್ನು ಹೋನ್ನತೊಗೇರಿಸಿದವರು ಬಿ.ವಿ.ಕಾರಂತ- ಬಾಬುಕೋಡಿ ವೆಂಕಟರಮಣ ಕಾರಂತ್

 ಬಿ.ವಿ. ಕಾರಂತರ ರಂಗ ಯಾತ್ರೆ ಶುರುವಾದದ್ದು ಹೀಗೆ. ಪಾಣೆ ಮಂಗಳೂರಿನಿಂದ ಮಂಗಳೂರಿಗೆ, ಮಂಗಳೂರಿನಿಂದ ಮೈಸೂರಿಗೆ, ಅಲ್ಲಿಂದ ಕಾಶಿ, ಭೋಪಾಲ, ದಿಲ್ಲಿ, ಹೈದರಾಬಾದ್ ಹೀಗೆ ದೇಶ ವಿದೇಶಗಳಲ್ಲಿ ಬಿ.ವಿ.ಕಾರಂತರು 'ಸೈಕಲ್ ಹೊಡೆದದ್ದೇ ಹೊಡೆದದ್ದು'. ಅವರದು ಕೊನೆಯುಸಿರು ಇರುವವರೆಗೆ ನಡೆದ ನಿರಂತರ ರಂಗಯಾತ್ರೆ. ಈ ಯಾತ್ರೆಯಲ್ಲಿ ಕುಕ್ಕಾಜೆಯ ಬೋಯಣ್ಣ, ಬಿ.ವಿ. ಕಾರಂತರಾಗಿ ನಾಡಿನುದ್ದಗಲ ರಂಗಭೂಮಿಯ ಮೇರುವಾಗಿ ಬೆಳೆದು ನಿಂತರು. ಸೀಮೋಲ್ಲಂಘನವನ್ನೂ ಮಾಡಿದರು.

 ಕುಕ್ಕಜೆ ಶಾಲೆಯಲ್ಲೇ ಬಿ.ವಿ.ಕಾರಂತರ ರಂಗತಾಲೀಮೂ ಶುರುವಾಯಿತು. ಓದಿನೊಂದಿಗೆ 'ಸುಕ್ರುಂಡೆ ಐತಾಳರು', 'ನನ್ನ ಗೋಪಾಲ' ಮೊದಲಾದ ನಾಟಕಗಳಲ್ಲಿ ಅಭಿನಯಿಸಿದ ಬಿ.ವಿ.ಕಾರಂತರು ಎರಡು ರೂಪಾಯಿ ಬಹುಮಾನವನ್ನೂಗಿಟ್ಟಿಸಿದ್ದರು. ಎಂಟನೇ ಕ್ಲಾಸು ಮುಗಿದದ್ದೇ ಪುತ್ತೂರಿನ ಕುಕ್ರಬೈಲು ಕೃಷ್ಣಭಟ್ಟರ ಮಕ್ಕಳಿಗೆ ಮನೆಪಾಠ ಹೇಳುವ ಮಾಸ್ತರಾದರು. ಜೊತೆಗೆ, ಮಹಾಬಲ ಭಟ್ಟರ ತ್ಯಾಗರಾಜ ಸಂಗೀತ ಶಾಲೆಯಲ್ಲಿ ಸಂಗೀತ ಕಲಿಯಲಾರಂಭಿಸಿದ ಬೋಯಣ್ಣ ಬಿಡುವಾದಾಗ ಶಿವರಾಮ ಕಾರಂತರ 'ಬಾಲವನ' ಕ್ಕೂ ಭೇಟಿ ಕೊಡುತ್ತಿದ್ದುಂಟು.

 ತ್ಯಾಗರಾಜ ಸಂಗೀತ ಶಾಲೆಯ 'ಸಾಪಾ' ಸಾಲದೆನಿಸಿತೇನೋ ಮೈಸೂರು ಮಹಾರಾಜರನ್ನು ಭೇಟಿಯಾಗಿ ಅವರ ಆಶ್ರಯದಲ್ಲಿ ಸಂಗೀತ ಕಲಿಯ ಬೇಕೆಂಬ ಆಸೆ ಪ್ರಬಲವಾಯಿತು. 1944ರ ನವೆಂಬರ್ ಐದರಂದು ಪುತ್ತೂರಿನಿಂದ ಕಾಲ್ತೆಗೆದರು. ಮೈಸೂರು ತಲುಪಿದರು. ಮಹಾರಾಜರ ಭೇಟಿ ಕನಸಾಗಿಯೇ ಉಳಿಯಿತು. ವಾಸ್ತವದಲ್ಲಿ ಭೇಟಿಯಾದದ್ದು ಗುಬ್ಬಿ ಕಂಪನಿ ಮ್ಯಾನೇಜರ್ ಮಹದೇವ ಸ್ವಾಮಿಯವರನ್ನು ಎಂ.ಬಿ. ಮುನಿಯಪ್ಪನವರು ಗುಬ್ಬಿ ಕಂಪನಿಯ ಸಂಗೀತದ ಮಾಸ್ಟರ್. ಮಹದೇವ ಸ್ವಾಮಿಯವರು ಮಂಗಳೂರಿನ ಈ ಕೆಂಪುಮಾಣಿಯನ್ನು ಮುನಿಯಪ್ಪನವರ ಪರೀಕ್ಷೆಗೆ  ಒಡ್ಡಿದರು. ಟೆಸ್ಟಲ್ಲಿ 'ಶಾರೀರ ಚೆನ್ನಾಗಿದೆ' ಎಂದು ಸಮರ್ಥನೆ ದೊರೆಯಿತು. ಗುಬ್ಬಿ ಕಂಪನಿ ಸೇರಿದರು. ಗುಬ್ಬಿ ಕಂಪನಿ ನಾಟಕಗಳಲ್ಲಿ ಬಾಲಕೃಷ್ಣ ಮಾರ್ಕಾಂಡೇಯ ಮೊದಲಾದ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಗುಬ್ಬಿ ವೀರಣ್ಣ ಹಾಗೂ ಕಂಪನಿಯ ನಾಟಕಕಾರ, ನಿರ್ದೇಶಕ ಬಿ. ಪುಟ್ಟಸ್ವಾಮಯ್ಯನವರ ಗಮನ ಸೆಳೆದು, ವಿಶೇಷ ಪ್ರೋತ್ಸಾಹಕ್ಕೆ ಪಾತ್ರರಾದರು. ಕಾರಂತರು ಗುಬ್ಬಿ ಕಂಪನಿಯಲ್ಲಿ ಸ್ವಲ್ಪಕಾಲ ಕಾಯಮ್ಮಾಗಿ ಸ್ತ್ರೀ ಪಾತ್ರಗಳನ್ನು ಮಾಡಬೇಕಾಯಿತು. ಇದು, ಕಾರಂತರ ಸಂಗೀತ ಮತ್ತು ಅಭಿನಯ ಪ್ರತಿಭೆಗಳಿಗೆ ಹೆಚ್ಚು ಹೊಳಪು ನೀಡಿದ ಒರೆಗಲ್ಲಾಯಿತು. ಗುಬ್ಬಿ ಚನ್ನಬಸವೇಶ್ವರ ನಾಟಕ ಸಂಘದಲ್ಲಿ ಕಾರಂತರು ಆರು ವರ್ಷ ಇದ್ದು ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಉತ್ತಮ ನಟನಾಗಿ ಹೊರಹೊಮ್ಮಿದರು.

 ಗುಬ್ಬಿ ಕಂಪನಿ ಬಿಟ್ಟು ಕಾರಂತರು ಬೆಂಗಳೂರಿಗೆ ಬಂದರು. ಗುಬ್ಬಿ ಕಂಪನಿಯಲ್ಲಿದ್ದಾಗಲೇ ಕಾರಂತರು ಗಾಂಧೀಜಿಯವರ 'ಹರಿಜನ' ಪತ್ರಿಕೆ ಓದುವ ಪರಿಪಾಠ ಬೆಳೆಸಿಕೊಂಡಿದ್ದರು. ಇದರಿಂದಾಗಿ ಹಿಂದಿಯಲ್ಲಿ ವಿಶೇಷ ಮುತುವರ್ಜಿ ಬೆಳೆಯಿತು. ಖಾಸಗಿಯಾಗಿ ಹಿಂದಿ ಮಾಧ್ಯಮದಲ್ಲಿ ಓದಿ ಬರೆದು, ಬಿ.ಎ., ಪರೀಕ್ಷೆ ಪಾಸುಮಾಡಿದರು. ಕಾರಂತರು ಗುಬ್ಬಿ ಕಂಪನಿ ಬಿಟ್ಟರೂ ವೀರಣ್ಣನವರ ಪ್ರೋತ್ಸಾಹ ನಿಂತಿರಲಿಲ್ಲ. ಓದಿನ ದಿನಗಳಲ್ಲಿ ಗುಬ್ಬಿ ವೀರಣ್ಣನವರು ಕಾರಂತರಿಗೆ ಆರ್ಥಿಕ ನೆರವು ನೀಡಿದರು. ಬೆಂಗಳೂರಿನ ಹಿಂದಿ ಪ್ರಚಾರಕ ವಿದ್ಯಾಲಯದಲ್ಲಿ ಸ್ನಾತಕದವರೆಗೆ ಕಲಿತ ಕಾರಂತರು ಸ್ನಾತಕೋತ್ತರ ಅಧ್ಯಯನಕ್ಕಾಗಿ ಕಾಶಿಗೆ ಹೋದರು. 1956-58ರಲ್ಲಿ ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಎಂ.ಎ. ಪಾಸು ಮಾಡಿದರು. ಇದೇ ಕಾಲದಲ್ಲಿ ಪಂಡಿತ ಓಂಕಾರನಾಥ ಠಾಕೂರರಿಂದ ಹಿಂದೂಸ್ಠಾನಿ ಸಂಗೀತ ಕಲಿತರು. ವೀರಣ್ಣನವರಿಂದ ಇನ್ನೂರು ರೂಪಾಯಿ ಸಾಲ ಪಡೆದು ಪಿ.ಎಚ್.ಡಿ. ಗೆ ರಿಜಿಸ್ಟರ್ ಮಾಡಿಸಿದರು. ವಿಷಯ: 'ರಂಗಭೂಮಿ ಮತ್ತು ಹಿಂದಿ ನಾಟಕ' ಪ್ರೊಫೆಸರ್ ಹಜಾರಿ ಪ್ರಸಾದ್ ದ್ವಿವೇದಿ ಮಾರ್ಗದರ್ಶಕರಾಗಿದ್ದರು.

 1958ರ್ ಜೂನ್ 6ರಂದು ಕಾರಂತರು ಪ್ರೇಮಾಳನ್ನು ಬಾಳ ಸಂಗಾತಿಯಾಗಿ ವರಿಸಿದರು. ಪರಸ್ಪರ ಒಪ್ಪಿ ಆದ ಮದುವೆ.

 ಹಿಂದಿ ಸಾಹಿತ್ಯ ಅಧ್ಯಯನಕ್ಕೂ ರಂಗಭೂಮಿ ಮತ್ತು ನಾಟಕವನ್ನೇ ಆರಿಸಿಕೊಂಡ ಬಿ.ವಿ. ಕಾರಂತರು 1960ರಲ್ಲಿ ಅಭಿನಯ ಕಲೆಯನ್ನು ಕರಗತಮಾಡಿಕೊಳ್ಳಲು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಸೇರಿದರು. ಎನ್. ಎಸ್. ಡಿ. ವಿದ್ಯಾರ್ಥಿಯಾಗಿದ್ದಾಗ ಭಾಸನ 'ಸ್ವಪ್ನ ವಾಸವದತ್ತ', ಕಾರ್ನಾಡರ 'ತುಘಲಕ್' ನಾಟಕಗಳನ್ನು ಹಿಂದಿಗೆ ಅನುವಾದಿಸಿದರು. ಈ ನಾಟಕಗಳ ಅನುವಾದ ಮತ್ತು ರಂಗ ಪ್ರಯೋಗಗಳಿಂದ ಶಾಲೆಯ ನಿರ್ದೇಶಕ ಅಲ್ಕಾಜಿಯವರ ವಿಶೇಷಗಮನಕ್ಕೆ ಪಾತ್ರರಾದರು.

 ಎನ್.ಎಸ್.ಡಿ. ಪದವಿ ಪಡೆದ ನಂತರ ಕಾರಂತರು ಸ್ವಲ್ಪ ಕಾಲ ದೆಹಲಿಯ ಪಟೇಲ್ ಸ್ಕೂಲಿನಲ್ಲಿ ಡ್ರಾಮಾಟೀಚರ್ ಆಗಿದ್ದರು. ಈ ಅವಧಿಯಲ್ಲಿ ಅವರು ಮಿತ್ರರೊಡಗೂಡಿ 'ಕನ್ನಡ ಭಾರತಿ' ಆರಂಭಿಸಿದರು. ಇಲ್ಲಿ, 'ತುಘಲಕ್', 'ದಾರಿಯಾವುದಯ್ಯ ವೈಕುಂಠಕ್ಕೆ' ಮೊದಲಾದ ನಾಟಕಗಳಿಂದ ದೆಹಲಿ ರಂಗಭೂಮಿ ವಲಯಗಳಲ್ಲಿ ವಿಶೇಷ ಗೌರವಾದರಗಳನ್ನು ಗಳಿಸಿದರು.

 ಬಿ.ವಿ. ಕಾರಂತರು ಬೆಂಗಳೂರಿನಲ್ಲಿ ಢಾಳವಾಗಿ ಕಾಣಿಸಿಕೊಂಡದ್ದು ಎಪ್ಪತ್ತರ ದಶಕದ ಶುರುವಿನಲ್ಲಿ. ಈ ವೇಳೆಗೆ ಕರ್ನಾಟಕದಲ್ಲಿ ವೃತ್ತಿರಂಗಭೂಮಿ ಅವಸಾನದ ಅಂಚಿಗೆ ಬಂದಿತ್ತು. ಹವ್ಯಾಸಿ ರಂಗಭೂಮಿಯೂ ಡ್ರಾಯಿಂಗ್ ರೂವರ್ ನಾಟಕಗಳ ಸೀಮಿತಿಯಲ್ಲಿ ಚಲನಶೀಲತೆ ಕಳೆದುಕೊಂಡು ಜಡವಾಗಿತ್ತು. ಅದು, ಬೆಂಗಳೂರಿನ ಹವ್ಯಾಸಿ ರಂಗಭೂಮಿಯಂತೂ ಪುನರುಜ್ಜೀವನದ ದೋಹದಕ್ಕಾಗಿ ಕಾಯುತ್ತಾ ನಿಂತಿದ್ದ ದಿನಗಳು. ರವೀಂದ್ರ ಕಲಾಕ್ಷೇತ್ರವೂ ಬಂದಾಗಿತ್ತು.

 ಶ್ರೀರಂಗರು ಕರ್ನಾಟಕ ಶಿಕ್ಷಣ ಇಲಾಖೆಯ ಶಿಕ್ಷಕರಿಗಾಗಿ ನಡೆಸುತ್ತಿದ್ದ ನಾಟಕ ಶಿಬಿರಗಳಲ್ಲಿ ಬೋಧಿಸಲು ಬೆಂಗಳೂರಿಗೆ ಆಗಮಿಸಿದ ಬಿ.ವಿ. ಕಾರಂತರನ್ನು ನಿಂತನೀರಾಗಿದ್ದ ಹವ್ಯಾಸಿ ರಂಗಭೂಮಿ ಸೆಳೆಯಿತು. ಲಂಕೇಶ್, ವಿ. ರಾಮಮೂರ್ತಿ ಮೊದಲಾದವರ ಕರೆಗೆ ಓಗೊಟ್ಟು ರವೀಂದ್ರ ಕಲಾಕ್ಷೇತ್ರದ ಹಿಂದಿನ ಬಯಲನ್ನೇ ರಂಗಭೂಮಿಯಾಗಿಸಿದರು. ಕಾರ್ನಾಡರ 'ಹಯವದನ', ಕಂಬಾರರ 'ಜೋಕುಮಾರಸ್ವಾಮಿ' ಮತ್ತು ಲಂಕೇಶರ 'ಸಂಕ್ರಾಂತಿ' ನಾಟಕಗಳನ್ನು ಆಡಿಸಿದರು. ಈ ಮೂರು ರಂಗ ಪ್ರಯೋಗಗಳು ಕನ್ನಡ ಹವ್ಯಾಸಿ ರಂಗಭೂಮಿಗೆ ನವಚೈತನ್ಯ, ನವೋಲ್ಲಾಸಗಳನ್ನು ತಂದು ಕೊಟ್ಟವು. ಕಾರಂತರು ಈ ಮೂರು ನಾಟಕಗಳಲ್ಲಿ ಜಾನಪದ ರಂಗಭೂಮಿಯ ಸಂಗೀತ, ಕುಣಿತಗಳನ್ನು ಸಾರ್ಥಕವಾಗಿ ಬಳಸಿ ತಮ್ಮ ಸೃಜನಶೀಲತೆಯನ್ನು ಮೆರೆದರು. 'ಸತ್ತವರ ನೆರಳು' ಕಾರಂತರ ನಿರ್ದೇಶನದಲ್ಲಿ ಇನ್ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ಹವ್ಯಾಸಿರಂಗಭೂಮಿಯಲ್ಲಿ ಒಂದು ದಾಖಲೆಯನ್ನೇ ಸ್ಥಾಪಿಸಿತು. ಕಾರಂತರು ಹವ್ಯಾಸಿರಂಗಭೂಮಿಗೆ ಪರಿಚಯಿಸಿದ ಜಾನಪದ ರಂಗಭೂಮಿಯ ಸಂಗೀತ, ನೃತ್ಯ ಮೊದಲಾದ ಪರಿಕರಗಳು ಈ ಬಗೆಯ ಹೊಸ ಅಲೆಯ ನಾಟಕಗಳಿಗೆ ನಾಂದಿ ಹಾಡಿದವು. ಶ್ರೀರಂಗರ ನಾಟಕಗಳು, ಸಂಸರ ನಾಟಕಗಳು, ಕುವೆಂಪು ಅವರ 'ಚಂದ್ರಹಾಸ'. ಪು.ತಿ.ನ ಅವರ 'ಗೋಕುಲ ನಿರ್ಗಮನ' ಮೊದಲಾದ ನಾಟಕಗಳನ್ನು ನಿರ್ದೇಶಿಸಿ ಕಾರಂತರು ರಂಗಭೂಮಿಯ ಹೊಸ ಹೊಸ ಸಾಧ್ಯತೆಗಳತ್ತ ಬೆರಳು ಮಾಡಿದರು. ಏವಂ ಇಂದ್ರಜಿತ್, ಸದ್ದು ವಿಚಾರಣೆ ನಡೆಯುತ್ತಿದೆ, ಅಂಧಯುಗ ಮೊದಲಾದ ಅನುವಾದಿತ ನಾಟಕಗಳನ್ನು ರಂಗಕ್ಕೆ ತಂದು ಕನ್ನಡೇತರ ರಂಗಭೂಮಿಯನ್ನು ಪರಿಚಯಿಸಿದ ಕೀರ್ತಿ ಕಾರಂತರದು.

 ಮಕ್ಕಳ ರಂಗಭೂಮಿ ಬಿ.ವಿ. ಕಾರಂತರ ಮತ್ತೊಂದು ಮುಖ್ಯ ಕಾಳಜಿಯಾಗಿತ್ತು. ಮಕ್ಕಳಿಗಾಗಿ, ಪತ್ನಿ ಪ್ರೇಮಾ ಅವರ ಜೊತೆಗೂಡಿ ರಂಗ ಶಿಬಿರಗಳನ್ನು ನಡೆಸಿದ ಕಾರಂತರು ಪಂಜರ ಶಾಲೆ, ಟಾಗೂರರ 'ಇಸ್ಪೀಟ್ ರಾಜ್ಯ; ಕುವೆಂಪು ಅವರ 'ನನ್ನ ಗೋಪಾಲ'; ಎಚ್.ಎಸ್.ವೆಂಕಟೇಶ ಮೂರ್ತಿಯವರ 'ಅಳಿಲು ರಾಮಾಯಣ', ಕಂಬಾರರ 'ಪುಷ್ಪರಾಣಿ' ಮೊದಲಾದ ಸ್ಮರಣೀಯ ರಂಗಪ್ರಯೋಗಗಳನ್ನು ಕೊಟ್ಟರು. ಮಕ್ಕಳ ಸುಪ್ತ ಪ್ರತಿಭೆ, ಕುತೂಹಲಗಳನ್ನು ಬಳಸಿಕೊಳ್ಳುವುದರಲ್ಲಿ ಕಾರಂತರು ಸಿದ್ಧ ಹಸ್ತರಾಗಿದ್ದರು.

 ಬಿ.ವಿ. ಕಾರಂತರು ಸಂಚಾರಿ ರಂಗಭೂಮಿಯಂತಿದ್ದರು. ಯಾವುದೇ ಒಂದು ಊರು, ಒಂದು ಸಂಸ್ಥೆಗೆ ಕಟ್ಟು ಬಿದ್ದಿರಲಿಲ್ಲ. ದೆಹಲಿ, ಭೋಪಾಲ್, ಬೆಂಗಳೂರು, ಮೈಸೂರು, ಚಂಡೀಗಢ, ಗ್ವಾಲಿಯರ್, ಲಂಡನ್, ಹಂಗೇರಿ-ಹೀಗೆ ಕಾರಂತರ ರಂಗ ಯಾತ್ರೆಯ ಜಾಡು. 1977-81ರ ಅವಧಿಯಲ್ಲಿ ಕಾರಂತರು ದೆಹಲಿ ರಾಷ್ಟ್ರೀಯ ನಾಟಕ ಶಾಲೆ ಎನ್.ಎಸ್.ಡಿ ನಿರ್ದೇಶಕರಾಗಿದ್ದರು. ಈ ಅವಧಿಯಲ್ಲಿ ಅವರು ನಿರ್ದೇಶಿಸಿದ 'ಬರ್ನಮ್ ವನ' (ಶೇಕ್ಸಪಿಯರನ ಮ್ಯಾಕಬೆತ್' ನಾಟಕದ ಹಿಂದಿ ರೂಪಾಂತರ), ಷಹಜಹಾನ್, ಅಂಧೇರ್ ನಗರಿ ಚೌಪಟ್ ರಾಜಾ ರಂಗ ಪ್ರಯೋಗಗಳು ರಾಷ್ಟ್ರವ್ಯಾಪಿ ರಂಗಭೂಮಿ ಅಭಿಮಾನಿಗಳ ಆಸಕ್ತಿಯನ್ನು ಸೆಳೆದವು. 'ಬರ್ನಮ್ ವನ'ದಲ್ಲಿ ಕಾರಂತರು ಯಕ್ಷಗಾನದ ಚಲನವಲನ ಹಾಗೂ ಮದ್ದಳೆ, ಚಂಡೆಗಳನ್ನು ಬಳಸಿದ್ದು; ಇಂಡೋನೇಷಿಯಾ, ಕಾಂಬೋಡಿಯಾ ರಂಗಭೂಮಿಯ ವಸ್ತ್ರ ವಿನ್ಯಾಸಗಳನ್ನು ಬಳಸಿದ್ದು ಅವರ ಪ್ರಯೋಗಶೀಲತೆಗೆ ಉತ್ತಮ ನಿದರ್ಶನ.

 ಕಾರಂತರು 1982ರಿಂದ 1986ರವರೆಗೆ ಭೋಪಾಲದ ರಂಗಮಂಡಲದಲ್ಲಿದ್ದರು. ಅಲ್ಲಿ ಅವರು 'ಘಾಸಿರಾಮ್ ಕೊತ್ವಾಲ್', 'ಮಾಳವಿಕಾಗ್ನಿ ಮಿತ್ರ', 'ಜರಾಸಂಧ' ಮೊದಲಾದ ನಾಟಕಗಳನ್ನು ನಿರ್ದೇಶಿಸಿ ಹೆಸರುಗಳಿಸಿದರು. ಭೋಪಾಲ್‍ನಲ್ಲಿ ಇದ್ದ ಕಾಲದಲ್ಲಿ ಕಾರಂತರು ತಮ್ಮ ವೈಯಕ್ತಿ ಜೀವನದ ಅಗ್ನಿ ದಿವ್ಯವನ್ನೂ ಎದುರಿಸಬೇಕಾಯಿತು. ನಟಿ ವಿಭಾ ಆಕಸ್ಮಿಕವಾಗಿ ಸುಟ್ಟು ಕೊಂಡ ಪ್ರಕರಣದಲ್ಲಿ ಕಾರಂತರನ್ನು ಸಿಕ್ಕಿಸಲಾಯಿತು. ಬಂಧನ, ವಿಚಾರಣೆ ಎದುರಿಸಿ ಕಾರಂತರು ಈ 'ಅಗ್ನಿ ದಿವ್ಯ'ದಲ್ಲಿ ಗೆದ್ದು ಬಂದರು.

 ಕಾರಂತರ 'ಬರ್ನಮ್ ವನ' ಮೊದಲಾದ ನಾಟಕಗಳನ್ನು ನೋಡಿ ಪ್ರಭಾವಿತರಾಗಿದ್ದ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಕರ್ನಾಟಕದಲ್ಲೂ ಭೋಪಾಲ್ ಮಾದರಿ ರಂಗಮಂಡಲ ಒಂದನ್ನು ಕಟ್ಟಬಾರದೇಕೆ ಎಂಬ ಆಲೋಚನೆ ಬಂತು. ಇದರ ಫಲವಾಗಿ ಮೈಸೂರಿನಲ್ಲಿ 1989ರಲ್ಲಿ ರಂಗಾಯಣ ರೆಪರ್ಟರಿ ಹುಟ್ಟಿಕೊಂಡಿತು. ಕಾರಂತರು ರಂಗಾಯಣದ ಮೊದಲ ನಿರ್ದೇಶಕರಾದರು. 1995ರವರೆಗೆ ಅಲ್ಲಿದ್ದು ತಮ್ಮ ಕನಸಿನ ರಂಗಾಯಣವನ್ನು ಹತ್ತು ಹಲವಾರು ಆಯಾಮಗಳೊಂದಿಗೆ ಕಟ್ಟಿ ಬೆಳೆಸಿದರು. ನಟ ನಟಿಯರ ತರಬೇತಿ, ಹೊಸ ನಾಟಕಗಳ ರಂಗ ಪ್ರಯೋಗ, ರಂಗ ಸಂಗೀತ, ರಂಗ ಸಜ್ಜಿಕೆ, ವಸ್ತ್ರ ವಿನ್ಯಾಸ, ಆಧುನಿಕ ರಂಗ ಸ್ಥಳಗಳ (sಣಚಿge) ನಿರ್ಮಾಣ ಹೀಗೆ ಹಲವಾರು ನಿಟ್ಟುಗಳಲ್ಲಿ ರಂಗಾಯಣವನ್ನು ಕಟ್ಟಿ ಬೆಳೆಸಿದ ಕೀರ್ತಿಕಾರಂತರದು. 'ರಂಗಾಯಣ' ರಂಗರಸಿಕರ ಯಾತ್ರಾಸ್ಥಳವಾಯಿತು.

 ಚಲನಚಿತ್ರ : ರಂಗಭೂಮಿ ಕಾರಂತರ ತೌರುಮನೆ. ಅವರು ಸಿನಿಮಾ ಕಲೆಗೂ ಸ್ವಲ್ಪಕಾಲ ವಲಸೆ ಹೋಗಿದ್ದುಂಟು. ಆದರೆ ಸಿನಿಮಾದ ಜಗಮಗಗಳಿಗೆ ಮರುಳಾಗಿ ಅಲ್ಲೇ ನಿಲ್ಲಲಿಲ್ಲ.

 'ಚೋಮನ ದುಡಿ' ಬಿ.ವಿ. ಕಾರಂತರ ಮೊದಲ ಚಿತ್ರ. ಮೊದಲ ಚಿತ್ರಕ್ಕೇ ರಾಷ್ಟ್ರ ಪ್ರಶಸ್ತಿಯ ಗರಿ. ರಾಷ್ಟ್ರ ಪ್ರಶಸ್ತಿಯ ತೀರ್ಪುಗಾರರಲ್ಲಿ ಒಬ್ಬರಾದ, ಭಾರತೀಯ ಸಿನಿಮಾದ ಅಗ್ರಗಣ್ಯ ನಿರ್ದೇಶಕ ಕೆ.ಎ. ಅಬ್ಬಾಸ್ ಕಾರಂತರಿಗೆ ಬರೆದ ಪತ್ರದಲ್ಲಿ, “ಭಾರತದಲ್ಲಿ ಮತ್ತೊಬ್ಬ ಸತ್ಯಜಿತ್ ರಾಯ್ ಹುಟ್ಟಿದ್ದಾನೆ ಎಂದು ಎಲ್ಲರೂ ಅಭಿಪ್ರಾಯ ಪಟ್ಟರು” ಎಂದು ತಿಳಿಸಿದ್ದಾರೆ. ಆದರೆ ಇಂಥ ಪ್ರಶಂಸೆಗಳಿಂದ ಕಾರಂತರು ಹಿಗ್ಗಲಿಲ್ಲ. “ನಾಟಕದಲ್ಲಿ ಮಾತ್ರ ಮನುಷ್ಯ ಹೇಗಿದ್ನೋ ಹಾಗೆ ಜೀವಂತವಾಗಿ ಕಾಣಿಸುತ್ತಾನೆ” ಎಂದು ರಂಗಭೂಮಿಯಲ್ಲೇ ಉಳಿದರು.

 ಕಾರಂತರು, ಗಿರೀಶ್ ಕಾರ್ನಾಡರ ಜೊತೆಗೂಡಿ 'ವಂಶವೃಕ್ಷ' ಮತ್ತು 'ತಬ್ಬಲಿಯು ನೀನಾದೆ ಮಗನೆ' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 'ಚೋರ್ ಚೋರ್ ಛಿಪ್ ಛಿಪ್ ಜಾ' ಕಾರಂತರು ಮಕ್ಕಳಿಗಾಗಿ ನಿರ್ದೇಶಿಸಿದ ಚಿತ್ರ.  ಇದಲ್ಲದೆ, ' ಶಿವರಾಮ ಕಾರಂತರು ಮತ್ತು 'ದಕ್ಷಿಣ ಕನ್ನಡದ ಭೂತಾರಾಧನೆ' ಕಾರಂತರು ನಿರ್ದೇಶಿಸಿರುವ ಸಾಕ್ಷ್ಯ ಚಿತ್ರಗಳು.

 ಸಿನಿಮಾ ರಂಗದಲ್ಲಿ, ನಿರ್ದೇಶನಕ್ಕಿಂತ ಕಾರಂತರ ಕೊಡುಗೆ ಸಂಗೀತದಲ್ಲೇ ಹೆಚ್ಚು. ಕಾರಂತರು ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿದ್ದು, ಮೃಣಾಲ್ ಸೇನ್ ಅವರ 'ಪರಶುರಾಮ್', 'ಖಾರಿಜ್', ಮತ್ತು 'ಏಕ್ ದಿನ್ ಪ್ರತಿದಿನ್', ಎಂ.ಎಸ್.ಸತ್ಯು ಅವರ 'ಕನ್ನೇಶ್ವರ ರಾಮ', ಜಿ.ವಿ. ಅಯ್ಯರ್ ಅವರ 'ಹಂಸಗೀತೆ', 'ಕುದುರೆ ಮೊಟ್ಟೆ', ಶಂಕರಾಚಾರ್ಯ', 'ಭಗವದ್ಗೀತೆ', ಕಾರ್ನಾಡರ 'ಕಾಡು' ಮತ್ತು 'ಆ ಮನಿ' ಗಿರೀಶ್ ಕಾಸರವಳ್ಳಿಯವರ 'ಘಟಶ್ರಾದ್ಧ' 'ಆಕ್ರಮಣ' ಮತ್ತು 'ಮೂರುದಾರಿಗಳು', ಬರಗೂರರ 'ಬೆಂಕಿ, ಪ್ರೇಮಾಕಾರಂತರ 'ಫಣಿಯಮ್ಮ' ಮತ್ತು 'ನಕ್ಕಳಾ ರಾಜಕುಮಾರಿ' ಮುಖ್ಯವಾದವು. ವಿ.ಆರ್.ಕೆ ಪ್ರಸಾದರ 'ಋಷ್ಯಶೃಂಗ' ಹಾಗೂ ಕಾಸರವಳ್ಳಿಯವರ 'ಘಟಶ್ರಾದ್ಧ' ಚಿತ್ರಗಳ ಸಂಗೀತ ನಿದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಹಾಗೂ 'ಹಂಸಗೀತೆ' ಸಂಗೀತ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿ ಕಾರಂತರಿಗೆ ಲಭಿಸಿವೆ.

ಪ್ರಶಸ್ತಿ ಪುರಸ್ಕಾರಗಳು: ಮುಗ್ಧತೆಯೇ ಮೈವೆತ್ತಿ ಬಂದಂತಿದ್ದ ಬಿ.ವಿ. ಕಾರಂತರು, ಪ್ರಚಾರ-ಹೊಗಳಿಕೆ. ಪ್ರಶಸ್ತಿಗಳಿಗಾಗಿ ಎಂದೂ ಪರಿತಪಿಸಿದವರಲ್ಲ. ಆದರೆ ಇದಾವುದೂ ಅವರನ್ನು ಬಿಡಲಿಲ್ಲ. ತಾವಾಗಿಯೇ ಅವರನ್ನು ಅರಸಿಕೊಂಡು ಹೋದವು.

 'ವಂಶವೃಕ್ಷ' ಚಿತ್ರಕ್ಕೆ ಗಿರೀಶಕಾರ್ನಾಡರ ಜೊತೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದಿರುವ ಕಾರಂತರು ರಂಗಭೂಮಿ ಮತ್ತು ಸಿನಿಮಾ ನಿರ್ದೇಶನಗಳಿಗಾಗಿ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. 'ಚೋಮನ ದುಡಿ' ಚಿತ್ರಕ್ಕಾಗಿ ಅವರು ರಾಷ್ಟ್ರ, ರಾಜ್ಯ ಪ್ರಶಸ್ತಿಗಳ ಜೊತೆ ಲಂಡನ್ ಫಿಲ್ಮೆ ಫೆಸ್ಟಿವಲ್ ಪ್ರಶಸ್ತಿಯನ್ನೂ ಪಡೆದವರು. 1981ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಕಾರಂತರನ್ನು ಗೌರವಿಸಿದೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1983), ಮಧ್ಯ ಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ ಪ್ರಶಸ್ತಿ (1994), ಗುಬ್ಬಿ ವೀರಣ್ಣ ಪ್ರಶಸ್ತಿ (1996)-ಬಿ.ವಿ. ಕಾರಂತರನ್ನು ಗೌರವಾಲಂಕಾರಗಳಿಂದ ಮಾನ್ಯ ಮಾಡಿದ ಪ್ರಮುಖ ಪ್ರಶಸ್ತಿಗಳು.

 ಬಿ.ವಿ. ಕಾರಂತರು ನಿರುತ್ಸಾಹ, ಸೋಲು, ಆಯಾಸ ಇವುಗಳನ್ನು ಕಂಡೇ ಇಲ್ಲ ಎಂಬಂತೆ ಬದುಕಿನುದ್ದಕ್ಕೂ ರಂಗಭೂಮಿಗೆ ತಮ್ಮನ್ನು ಸಮರ್ಪಿಸಿಕೊಂಡು ದುಡಿದರು. ಬೆಂಗಳೂರಿನ ಗಿರಿನಗರದಲ್ಲಿ ಮನೆಮಾಡಿ ನಿಂತರು. ರಂಗಭೂಮಿ 'ನನ್ನ ಪ್ರೊಫೆಷನ್' ಎಂದು ದೃಢವಾಗಿ ನಂಬಿದ್ದ ಅವರು ಕೊನೆಯುಸಿರಿನವರೆಗೂ ರಂಗಭೂಮಿಗೆ ಮೀಸಲಾಗಿದ್ದರು. 2002ರ ಸೆಪ್ಟಂಬರ್ 1ರಂದು ಬಿ.ವಿ.ಕಾರಂತರ ದೇಹಾವಸಾನವಾಯಿತು.

 ಕನ್ನಡ ಸಾಹಿತ್ಯದ ಸುಪ್ರಸಿದ್ಧ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಹೇಳಿರುವಂತೆ '...ಕಾರಂತರೆಂದರೆ ಕನ್ನಡ ರಂಗಭೂಮಿ ಕಂಡ ಒಂದು ಕನಸು. ಅವರ ನಿಧನದಿಂದ ನಮಗೆ ಈಗ ಎಚ್ಚರವಾಗಿದೆ. ರಂಗಭೂಮಿ ಖಾಲಿಯಾಗಿದೆ'. ಕಾರಂತರು ಒಬ್ಬ ಶಾಪಗ್ರಸ್ತ ಗಂಧರ್ವ ಎಂಬುದೂ ಕುರ್ತಕೋಟಿಯವರ ಮಾತೇ.    (ಜಿ.ಎನ್.ಆರ್)

 ಬೆಂಗಳೂರಿನ ಗಿರಿನಗರ ಬಡಾವಣೆಯಲ್ಲಿರುವ ಕಾರಂತರ ಮನೆ 'ಬಾಬುಕುಡಿ' ಈಗ ರಂಗಭೂಮಿಗೆ ಸಂಬಂಧಪಟ್ಟಂತೆ ಅಪೂರ್ವ ಸಂಗ್ರಮಯವಾಗಿದೆ. ಕಾರಂತರು ತಮ್ಮ ಜೀವಿತಾವಧಿಯಲ್ಲಿ ಸಂಗ್ರಹಿಸಿದ ರಂಗಭೂಮಿಗೆ ಸಂಬಂಧಪಟ್ಟ ಗ್ರಂಥಗಳು, ಚಿತ್ರಗಳು, ಧ್ವನಿ ಸುರಳಿಗಳು, ವಾದ್ಯ ಪರಿಗಳನ್ನೆಲ್ಲ ಒಪ್ಪವಾಗಿ ದಾಖಲಿಸಿ, ಜೋಡಿಸಿಟ್ಟಿದ್ದಾರೆ. ಅವರ ಪತ್ನಿ ಪ್ರೇಮಾ ಕಾರಂತ.

 *

 